ಮೋಡ ಬಿತ್ತನೆ ಎಂದರೇನು

ಮೋಡಗಳೊಳಗೆ ಸೂಕ್ಷ್ಮ ಕಣಗಳು ಅಥವಾ ಅಂದರೆ ಕ್ಯಾಲ್ಸಿಯಂ ಕ್ಲೋರೈಡ್ ಅಥವಾ ಸಿಲ್ವರ್ ಅಯೋಡೈಡ್ ಹೊಂದಿರುವ ವಾಯುದ್ರವಗಳನ್ನು ಸಿಂಪಡಿಸುವ ಪ್ರಕ್ರಿಯೆಯನ್ನು ಮೋಡ ಬಿತ್ತನೆ ಎಂದು ಕರೆಯುತ್ತಾರೆ. ಈ ವಾಯುದ್ರವವು ಮೋಡಗಳೊಳಗಿನ ಸೂಕ್ಷ್ಮ ಭೌತಿಕ ಪ್ರಕ್ರಿಯೆಗಳನ್ನು ಬದಲಾಯಿಸುತ್ತದೆ. ಈ ಪ್ರಕ್ರಿಯೆಯು ಮೋಡದಲ್ಲಿರುವ ಹನಿಗಳ ಸಾಂದ್ರತೆಯನ್ನು ಹೆಚ್ಚಿಸಿ ಮಳೆಯಾಗುವಂತೆ ಪ್ರಚೋದಿಸುತ್ತದೆ.

ಮೋಡ ಬಿತ್ತನೆ ಕಾರ್ಯಾಚರಣೆಗಾಗಿಯೇ ಮಾರ್ಪಡಿಸಿದ ಎರಡು ವಿಮಾನಗಳ ಸಹಾಯದಿಂದ ಮೋಡದೊಳಗೆ ವಾಯುದ್ರವ ಸಿಂಪಡಣೆ ಮಾಡಲಾಗುತ್ತದೆ. ಹವಾಮಾನಶಾಸ್ತ್ರಜ್ಞರು ದೈನಂದಿನ ಹವಾಮಾನ ಪರಿಸ್ಥಿತಿಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಪ್ರತಿದಿನ ಮೋಡ ಬಿತ್ತನೆ ಮಾಡುವ ಯೋಜನೆಯ ಬಗ್ಗೆ ಮೋಡ ಬಿತ್ತಾನಾ ತಂಡಕ್ಕೆ ತಿಳಿಸುತ್ತಾರೆ. 200 ಕಿಲೋಮೀಟರ್ ವ್ಯಾಪ್ತಿಯ ವರಗೆ ಮಳೆ ಬರಿಸುವ ಮೋಡಗಳನ್ನು ಗುರುತಿಸಿ ಅದು ಇರುವ ದೂರ ಮತ್ತು ಎತ್ತರಗಳನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ ಹೊಂದಿರುವ ರೆಡಾರ್ ಗಳನ್ನು ಪ್ರಶಸ್ಥ ಸ್ಥಳಗಳಲ್ಲಿ ಅಳವಡಿಸಲಾಗುವುದು. ಈ ರೆಡಾರ್ ನಿಲ್ದಾಣದಲ್ಲಿರುವ ಹವಾಮಾನ ತಜ್ಞರು ಬಿತ್ತನೆಗೆ ಸೂಕ್ತವಾದ ಮೋಡಗಳನ್ನು ಗುರುತಿಸುತ್ತಾರೆ. ಹವಾಮಾನಶಾಸ್ತ್ರಜ್ಞರು ರೆಡಾರ್ ನಿಲ್ದಾಣ ಮತ್ತು ವಿಮಾನದ ನಡುವೆ ಸ್ಥಾಪಿಸಲಾದ ದೂರವಾಣಿ ಮೂಲಕ ಪೈಲಟ್‌ಗಳಿಗೆ ವಿಮಾನವನ್ನು ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ನಿರ್ದೇಶನಗಳನ್ನು ನೀಡುತ್ತಾರೆ. ಹವಾಮಾನಶಾಸ್ತ್ರಜ್ಞರು ಸೂಚಿಸಿದ ನಿಖರವಾದ ಪ್ರದೇಶಗಳಲ್ಲಿ ಪೈಲಟ್‌ಗಳು ಮಾರ್ಪಾಟಿತ ವಿಮಾನಗಳ ರೆಕ್ಕೆಗಳಿಗೆ ಅಳವಡಿಸಲಾದ ವಾಯುದ್ರವವನ್ನು ಹೋದಿರುವ ದೀಪಾವಳಿ ಹಬ್ಬದಲ್ಲಿ ಸುಡುವ ಹೂಕುಂಡಗಳ ಮಾದರಿಯಲ್ಲಿ ನಿರ್ಮಿಸಿಸಿರುವ “ಫ಼್ಲೇರ್” ಗಳನ್ನು ಸುಡುವ ಮೂಲಕ ಏರೋಸಾಲ್‌ಗಳನ್ನು ಮೋಡಗಳಲ್ಲಿ ಬಿಡುಗಡೆ ಮಾಡುತ್ತಾರೆ. ಈ ಪ್ರಕ್ರಿಯೆಯಿಂದ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತದೆ.

© All Rights Reserved Varshadhara 2019